ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಡಿಸೆಂಬರ್ 17 ರಂದು ಬೆಳಗಾವಿ ಚಲೋ ಮೂಲಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಧರಣಿ ಸತ್ಯಾಗ್ರಹ ಅಮ್ಮಿಕೋಳ್ಳಲಾಗಿದೆ!
ಸರ್ಕಾರ ಕಳೆದ ಚುನಾವಣಾ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿ, ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಡಿಸೆಂಬರ್ 17 ರಂದು ಬೆಳಗಾವಿಯಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಬೃಹತ್ ಹೋರಾಟ ನಡೆಸಲಿದೆ ಎಂದು ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪ್ರಸಾದ್ ನಿಡಸಾಲೆ ತಿಳಿಸಿದ್ದಾರೆ.2006ರ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ ಈಗಾಗಲೇ ಸುಮಾರು 4000 ಅನುದಾನಿತ ನೌಕರರು ಯಾವುದೇ ಪಿಂಚಣಿ ಇಲ್ಲದೆ ನಿವೃತ್ತರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಅನುದಾನಿತ ನೌಕರರ ಹಿಂದಿನ ಸೇವೆಯನ್ನು ಪರಿಗಣಿಸಿ ಯಾವುದೇ ಹಿಂಬಾಕಿ ಇಲ್ಲದೆ,ಅವರನ್ನು ಸಹ ಹಳೆಯ ಪಿಂಚಣಿಗೆ ಪರಿಗಣಿಸ ಬೇಕು ಎಂದು 2022ರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನುದಾನಿತ ನೌಕರರು ಸುಮಾರು 141 ದಿನಗಳ ಕಾಲ ಸತತ ಹೋರಾಟ
ಮಾಡಿದ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರದ ಜನಪ್ರತಿನಿಧಿಗಳು ತಮ್ಮ ಸರ್ಕಾರ ಬಂದಾಗ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನುದಾನಿತ ನೌಕರರಿಗೂ ಜಾರಿ ಮಾಡುವುದಾಗಿ ಭರವಸೆ ನೀಡಿ, ಪ್ರಣಾಳಿಕೆಯಲ್ಲಿ ಹಾಕಲಾಗಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಸುಮಾರು ಎರಡುವರೆ ವರ್ಷಗಳು ಮುಗಿದಿದ್ದರೂ ಇದುವರೆಗೂ ಇದರ ಬಗ್ಗೆ ಗಮನ ಹರಿಸದೆ ಇರುವುದರಿಂದ, ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಈ ಹೋರಾಟ ಮಾಡಬೇಕಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.ಇದರ ಜೊತೆಗೆ ಜ್ಯೋತಿಸಂಜೀವಿನಿ ಆರೋಗ್ಯ ವಿಮೆ, ಖಾಲಿ ಇರುವ ಹುದ್ದೆಗಳ ಶೀಘ್ರ ಭರ್ತಿ, ಅತಿಥಿ ಶಿಕ್ಷಕ ಹಾಗೂ ಉಪನ್ಯಾಸಕರ ನೇಮಕಾತಿ, ಇನ್ನಿತರ ಹತ್ತಾರು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ಡಿಸೆಂಬರ್ 17ರಂದು ಬೃಹತ್ ಹೋರಾಟ ರೂಪಿಸಲಾಗಿದೆ.ಅನುದಾನಿತ ನೌಕರರ ಮತ್ತು ಸಂಸ್ಥೆಗಳ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದ್ದು ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಸಂಘದ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗವಹಿಸುವಂತೆ ನಿಡಸಾಲೆ ಪ್ರಸಾದ್ ಮನವಿ ಮಾಡಿದರು @publicnewskunigal